ಉಪವಾಸದ ಉಪಯೋಗ
ಉಪವಾಸದ ವಿಧಗಳು, ಅದರ ವೈಜ್ಞಾನಿಕ ಹಿನ್ನೆಲೆ, ಆರೋಗ್ಯದ ಮೇಲೆ ಪರಿಣಾಮಗಳು ಹಾಗೂ ಉಪವಾಸದ ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ತಿಳಿಸುವ ಲೇಖನ.

ಉಪವಾಸ ಎಂಬುದು ಭಾರತೀಯ ಸಂಸ್ಕ್ರತಿಯಲ್ಲಿ, ಶಾಸ್ತ್ರಗಳಲ್ಲಿ ಮೊದಲಿಂದಲೂ ಪ್ರಸ್ತುತವಾಗಿರುವಂತಹುದು.ಸಂಸ್ಕ್ರತದಲ್ಲಿ,’ಲಂಘನಮ್ ಪರಮೌಷಧಂ’ ಎಂಬ ಮಾತಿದೆ.ಅಂದರೆ ಉಪವಾಸವೇ ದಿವ್ಯೌಷಧ. ಕ್ರಮಬದ್ಧವಾದ ಉಪವಾಸದ ಮೂಲಕ ದೇಹ ಶುದ್ಧಿ,ಮನಸ್ಸಿನ ನಿಗ್ರಹ ಸಾದ್ಯ ಎಂಬುದು ನಮ್ಮ ಋಷಿಮುನಿಗಳೇ ಕಂಡುಕೊಂಡ ಸತ್ಯ.ಆದರೆ ಯಾವುದೇ ಸಂಶೋಧನೆಗಳು,ಪುರಾವೆಗಳು ಇಲ್ಲದಿರುವುದರಿಂದ ಉಪವಾಸ ಒಳ್ಳೆಯದಲ್ಲ ಇದರಿಂದ ಪೋಷಕಾಂಶಗಳ ಕೊರತೆಯುಂಟಾಗಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದವು.ಇತ್ತೀಚೆಗೆ ಜಪಾನಿನ ವಿಜ್ಞಾನಿಯ, ಉಪವಾಸದಿಂದ ದೇಹಕ್ಕಾಗುವ ಲಾಭಗಳ ಕುರಿತ ಸಂಶೋಧನೆಗೆ ನೊಬೆಲ್ ಪಾರಿತೋಷಕ ದೊರೆತಿದೆ. ಇದರಿಂದ ನಮ್ಮ ಸಂಸ್ಕೃತಿ ಜಗತ್ತಿನೆಲ್ಲೆಡೆ ಅನುಕರಣೆಯಾಗುತ್ತಿದೆ.
ಹಾಗಾದರೆ ಉಪವಾಸದಿಂದಾಗುವ ಲಾಭಗಳೇನು…
ಉಪವಾಸದಲ್ಲಿ ಹಲವು ವಿಧಗಳಿವೆ.೧೨ಗಂಟೆಗಳ ಉಪವಾಸ ಅತ್ಯಂತ ಕಡಿಮೆ ಅವಧಿಯದಾಗಿದ್ದು, ೪ ವಾರಗಳ ವರೆಗಿನ ಉಪಾವಾಸ ಕೂಡ ಇದೆ. ಆದರೆ ೪೮ ಗಂಟೆಗೂ ಹೆಚ್ಚಿನ ಕಾಲಾವಧಿಯ ಉಪವಾಸವನ್ನು ತಜ್ಞರ ಸಲಹೆಯಿಲ್ಲದೇ ಮಾಡುವುದು ಬೇಡ.
ಅತ್ಯಂತ ಸರಳವಾಗಿ ವಿವರಿಸಬೇಕೆಂದರೆ,ನಾವು ಅಹಾರವನ್ನು ತೆಗೆದುಕೊಂಡಾಗ ಅದು ಜೀರ್ಣವಾಗಿ ಅಹಾರಾಂಶಗಳು ರಕ್ತಕ್ಕೆ ಸೇರಿ ಶಕ್ತಿಯಾಗಿ ಉಪಯೋಗಿಸಲು ಸಿಧ್ಧವಾಗಿರುತ್ತವೆ.೧೨ ಗಂಟೆಗಳ ನಂತರ ಆಹಾರ ಸೇವಿಸದಿದ್ದಲ್ಲಿ ನಮ್ಮ ಮೆದುಳಿನಿಂದ ಗ್ಲುಕೋಸ್ ಅವಶ್ಯಕತೆಯಿದೆ ಆಹಾರಬೇಕು ಎಂಬ ಸಂದೇಶ ಹೊರಟು ಹಸಿವಿನ ಒಂದು ಸಂವೇದನೆ ಅರಿವಾಗುವುದು.ಉಪವಾಸ ಮಾಡುವ ನಮ್ಮ ನಿರ್ಧಾರದಿಂದ ಆ ಸಂದರ್ಭದಲ್ಲಿ ಯಾವುದೇ ಆಹಾರ ತೆಗೆದುಕೊಳ್ಳದಿದ್ದಾಗ ಹಸಿವಿನ ತೀವ್ರತೆಯಿಂದ ಪ್ರಾರಂಭದಲ್ಲಿ ಸಿಡುಕು,ಸಿಟ್ಟುಗಳು ಸಹಜ.ಈ ಸಮಯದಲ್ಲಿ ಮೆದುಳಿಗೆ ಗ್ಲುಕೊಸ್ ಪೂರೈಕೆಗೆ ದೇಹದಲ್ಲಿ ವ್ಯರ್ಥವಾದಂತಹ ಅಂದರೆ,ನಾವು ಮೊದಲು ಸೇವಿಸಿದ ಆಹಾರಗಳಲ್ಲಿನ ಕೆಲವು ಪ್ರೋಟಿನ್ ಗಳು ಅಥವಾ ಇತರೆ ಪೋಷಕಾಂಶಗಳು ಇರುತ್ತವೆ.ಇಂತಹ ಅನುಪಯುಕ್ತ ಆಹಾರಾಂಶಗಳನ್ನು ಹೊಂದಿದ ಕೋಶಗಳು ಉಪವಾಸದ ಸಮಯದಲ್ಲಿ ಉಪಯೋಗಿಸಲ್ಪಡುತ್ತದೆ ಈ ಪ್ರಕ್ರಿಯೆಗೆ ’ಆಟೊಫೆಜಿ’ ಎಂದು ಹೆಸರು.ಹೀಗೆ ಉಪವಾಸ ದೇಹಶುದ್ಧಿಯಾಗುವಲ್ಲಿ ಸಹಾಯಕ ವಾಗುತ್ತದೆ.ಅಷ್ಟೆ ಅಲ್ಲದೇ ತೂಕ ಇಳಿಕೆಯಲ್ಲೂ ಕೂಡ ಇಂದು ಅನೇಕರು ಇಂಟರ್ಮಿಟ್ಟೆಂಟ್ ಫಾಸ್ಟಿಂಗ್ ಅಥವಾ ಅಲ್ಪಾವಧಿಯ ಉಪವಾಸವನ್ನೇ ಅನುಸರಿಸಿ ಗುಣಾತ್ಮಕ ಫಲಿತಾಂಶವನ್ನೇ ಹೊಂದಿದ್ದಾರೆ. ಅನುಪಯುಕ್ತ ಆಹಾರಂಶಗಳನ್ನು ಉಪಯೋಗಿಸದೇ ಹೋದಲ್ಲಿ ಅದು ದೇಹದ ಅನೇಕ ರೀತಿಯ ಅನಾರೋಗ್ಯಕ್ಕೆ ಕಾರಣವಾಗುತ್ತವೆ.
ಕ್ರಮಬದ್ಧವಾದ ಉಪವಾಸ, ಅನುಸರಿಸಬೇಕಾದ ಅಂಶಗಳು:
ಉದಾಹರಣೆಗೆ ೨೪ ಗಂಟೆಗಳ ಉಪವಾಸ ಪ್ರಾರಂಭಿಸುತ್ತೀರಿ. ನಿನ್ನೆ ರಾತ್ರಿ ೮ ಗಂಟೆಗೆ ಆಹಾರ ಸೇವಿಸಿದ್ದರೆ ಇಂದು ರಾತ್ರಿ ೮ರ ವರೆಗೆ ನಿರ್ಧಿಷ್ಟ ಸಮಯದಲ್ಲಿ ದ್ರವಾಹಾರ ಅಂದರೆ ನೀರು ಅಥವಾ ಹಣ್ಣಿನ ರಸ ಸೇವಿಸಬಹುದು.ರಾತ್ರಿಗೆ ಲಘು ಆಹಾರ ಸೇವಿಸಿ ಮರುದಿನ ಎಂದಿನಂತೆ ಪ್ರಾರಂಭಿಸಬಹುದು.
· ಉಪವಾಸಕ್ಕೆ ಮೊದಲು ಮತ್ತು ಮುಗಿಸಿದ ಕೂಡಲೆ ಎಣ್ಣೆಯಲ್ಲಿ ಕರಿದ,ಅತಿ ಹುಳಿ,ಖಾರ ಅಥವಾ ಜಡತ್ವವನ್ನುಂಟು ಮಾಡುವ ಆಹಾರಗಳ ಸೇವನೆ ಬೇಡ.ಇದರಿಂದ ಹೊಟ್ಟೆಉರಿ,ಗ್ಯಾಸ್ಟ್ರಿಕ್ ತೊಂದರೆಯಾಗಬಹುದು.
· ಉಪವಾಸದಲ್ಲಿ ನಿರ್ಧಿಷ್ಟ ಸಮಯದಲ್ಲಿ ನೀರು, ಎಳನೀರು,ಸಕ್ಕರೆ ಹಾಕದೇ ತಾಜಾ ಹಣ್ಣಿನ ರಸ ಸೇವಿಸುವುದರಿಂದ ಪೋಷಕಾಂಶಗಳು ದೊರೆಯುವುದರಿಂದ ನಿಮ್ಮ ಇತರೆ ಕೆಲಸಗಳಲ್ಲಿ ನಿಶ್ಯಕ್ತಿ ಉಂಟಾಗುವುದಿಲ್ಲ. ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳು ಇರುವುದಿಲ್ಲ.
· ಚಹಾ,ಕಾಫಿ ಸೇವನೆ ಬೇಡ.
· ಉಪವಾಸ ನಿಲ್ಲಿಸುವಾಗ ಒಂದೇ ಬಾರಿ ಘನಾಹಾರಗಳನ್ನು ಸೇವಿಸಬೇಡಿ.ತಾಜ ಹಣ್ಣು,ತರಕಾರಿಗಳ ರಸ,ಹಣ್ಣು ,ಗಂಜಿ ಅಥವಾ ಇನ್ಯಾವುದೇ ಸುಲಭವಾಗಿ ಜೀರ್ಣವಾಗುವಂತಹ ಮೆತ್ತಗಿನ ಆಹಾರವನ್ನೇ ಸೇವಿಸಿ.
ಮಧ್ಯಂತರ ಉಪವಾಸಗಳಲ್ಲಿ ಹಲವು ವಿಧಗಳಿವೆ.ನಮ್ಮ ದೇಹವನ್ನು ನಮಗಿಂತ ಚನ್ನಾಗಿ ಇನ್ಯಾರು ಬಲ್ಲವರಿಲ್ಲದಿರುವುದರಿಂದ ನಮಗೆ ಎಷ್ಟು ಹೊತ್ತಿನ ಉಪವಾಸ ನಮ್ಮನ್ನು ನಿಶ್ಚೇತಿತರನ್ನಾಗಿಸದೇ,ಆರೋಗ್ಯವನ್ನು ವೃದ್ಧಿಸಬಲ್ಲದು ಎಂಬುದನ್ನು ಕಂಡುಕೊಳ್ಳಿ.
ಧಾರ್ಮಿಕ ಹೆಸರಿನಲ್ಲಿ ಮಾಡುವ ಉಪವಾಸ, ಫಲಾಹಾರಗಳು ಎಷ್ಟೋಸಲ ಅದರ ಅರ್ಥ ಕಳೆದುಕೊಳ್ಳುತ್ತವೆ. ಏಕೆಂದರೆ ಫಲಾಹಾರದ ಸಂಧರ್ಭದಲ್ಲಿ ಅನ್ನವೊಂದನ್ನು ಬಿಟ್ಟು ಬೇರೆಲ್ಲವನ್ನು ತಿನ್ನಬಹುದೆಂಬ ತಪ್ಪು ತಿಳುವಳಿಕೆ ನಮ್ಮಲ್ಲಿ ಹೆಚ್ಚಾಗಿದೆ.ಫಲಾಹಾರದ ಹೆಸರಿನಲ್ಲಿ ಸಾಮಾನ್ಯ ಊಟಕ್ಕಿಂತ ಹೆಚ್ಚಿನ ಆಹಾರ ನಮ್ಮ ಹೊಟ್ಟೆ ಸೇರಿದರೆ ಅದು ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು ಖಂಡಿತ.ಉಪವಾಸದಷ್ಟೇ ಮಹತ್ವ ಅದನ್ನು ನಿಲ್ಲಿಸುವುದಕ್ಕೂ ಕೂಡ ಇದೆ.೧೬ ಅಥವಾ ೨೪ ಗಂಟೆಗಳ ಉಪಾವಾಸವಿದ್ದು ಮುಗಿಯುವ ಸಮಯದಲ್ಲಿ ಹಸಿವಾಗಿದೆಯೆಂದು ಕಂಠಪೂರ್ತಿ ತಿಂದರೆ ಅದರಿಂದ ಯಾವ ಲಾಭಗಳು ದೊರೆಯುವುದಿಲ್ಲ ಅಷ್ಟೇ ಅಲ್ಲದೆ ಅವೈಜ್ಞಾನಿಕ ಅನುಸರಣೆಯಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು..ತೂಕ ಇಳಿಕೆ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿಗೆ ಮಧ್ಯಂತರ ಉಪವಾಸ ಆರಂಭಿಸುವುದಾದರೆ ತಜ್ಞರ ಸಲಹೆಯಂತೆ ಸೂಕ್ತ ಕ್ರಮವನ್ನು ಅನುಸರಿಸಿ.
Dr. Poornima Lalguli
Dietician
This article is general nutrition information and is not a substitute for individual medical advice. Please consult a qualified professional about your specific circumstances.

