ಆರೋಗ್ಯ ಒಂದೇ ಬಾರಿಗೆ ಸಿಗುವ ನಿಧಿಯಲ್ಲ....ನಾವು ಪ್ರತಿದಿನ ಮಾಡುವ ಹೂಡಿಕೆ..💰 📈
ಆರೋಗ್ಯ ಎನ್ನುವುದು ರೋಗ ಬಂದಾಗ ಮಾತ್ರ ಗಮನಿಸಬೇಕಾದ ವಿಷಯವಲ್ಲ; ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕಾದ ಜೀವನಪದ್ಧತಿ. ನಮ್ಮ ಇಂದಿನ ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳು ನಮ್ಮ ಆರೋಗ್ಯದ ಜೊತೆಗೆ ಮುಂದಿನ ಪೀಳಿಗೆಯ ಆರೋಗ್ಯದ ಮೇಲೂ ಪ್ರಭಾವ ಬೀರುತ್ತವೆ.

ಕಳೆದ ವರ್ಷ ನನ್ನ Ph.D. ಅಧ್ಯಯನದ ಭಾಗವಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಕೆಲವು ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ಮತ್ತು ಪೋಷಕರಿಗೆ ಆಹಾರ, ಜೀವನಶೈಲಿ ಮತ್ತು ಆರೋಗ್ಯದ ಬಗ್ಗೆ ಒಂದಿಷ್ಟು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೆ. ಆಗ ಕೆಲವರು ನನ್ನ ಬಳಿ ಬಂದು, "ಅಯ್ಯೋ, ಚೆನ್ನಾಗಿ ತಿಂದುಂಡುಕೊಂಡು ಇರಬೇಕಾದ ವಯಸ್ಸಲ್ಲಿ ನೀವೇನು ಇವರಿಗೆ ಈಗಲೇ Nutrition, Health ಅಂತ ತಲೆ ತುಂಬಿಸ್ತೀರಲ್ಲ? ನಮ್ಮ ಕಾಲದಲ್ಲಂತೂ ಇಷ್ಟೊಂದು ಬಗೆಯ ಆಹಾರ ಸಿಗ್ತಾ ಇರಲಿಲ್ಲ ಇವರಾದರೂ ತಿನ್ನಲಿ ಬಿಡಿ" ಅಂತ ಹೇಳಿದ್ರು. ಇನ್ನೊಬ್ಬರು, "50 ವರ್ಷ ಆದಮೇಲೆ BP, Sugar ಎಲ್ಲ ಬರುತ್ತೆ, ಆಗ Diet ಮಾಡಿದ್ರೆ ಸಾಕು. ಈಗಿಂದಲೇ ಯಾಕೆ ತಲೆ ಕೆಡಿಸ್ಕೋಬೇಕು?" ಅಂತ ಕೇಳಿದ್ರು.
ಇಂಥ ಮಾತುಗಳನ್ನ ನಾನು ಹಲವು ಬಾರಿ ಕೇಳಿದ್ದೀನಿ. ಆದ್ರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸಮಯ ರೋಗ ಬಂದ ನಂತರ ಅಲ್ಲ; ರೋಗ ಬರದಂತೆ ತಡೆಗಟ್ಟುವುದು ಅಗತ್ಯ.
ಆರೋಗ್ಯ ಒಂದೇ ದಿನದಲ್ಲಿ ನಿರ್ಮಾಣ ಆಗೋದಲ್ಲ..ನಾವು ವರ್ಷಗಟ್ಟಲೆ ಮಾಡುವ ಆಹಾರದ ಆಯ್ಕೆ, ದೈಹಿಕ ಚಟುವಟಿಕೆ, ನಿದ್ರೆಯ ಗುಣಮಟ್ಟ, ಒತ್ತಡ ನಿರ್ವಹಣೆ, ನಾವಿರುವ ಪರಿಸರ ಇವೆಲ್ಲದರ ಒಟ್ಟು ಪರಿಣಾಮವೇ ನಮ್ಮ ದೀರ್ಘಕಾಲೀನ ಆರೋಗ್ಯವನ್ನ ರೂಪಿಸುತ್ತೆ. ಈಗ ಭಾರತದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಹೃದಯ ರೋಗ ಮುಂತಾದ ಕಾಯಿಲೆಗಳು ದೊಡ್ಡ ಸಮಸ್ಯೆಯಾಗಿವೆ. ಇವು ಇನ್ನು ಮುಂದೆ ಕೇವಲ ವಯಸ್ಸಾದವರ ಸಮಸ್ಯೆಗಳಲ್ಲ ಇಪ್ಪತ್ತರ, ಮೂವತ್ತರ ಅಥವಾ ಇನ್ನೂ ಸಣ್ಣ ವಯಸ್ಸಿನವರಲ್ಲೂ ಇವು ಈಗ ಸಾಮಾನ್ಯವಾಗ್ತಿವೆ. ಇದರ ಅರ್ಥ ಸ್ಪಷ್ಟ: prevention ಅನ್ನ ಇನ್ನಷ್ಟು ಬೇಗ, ಇನ್ನಷ್ಟು ಗಂಭೀರವಾಗಿ ಶುರು ಮಾಡಬೇಕು
ಆರೋಗ್ಯದ ಕಥೆ ಶುರುವಾಗೋದು ಹುಟ್ಟುವ ಮೊದಲೇ.
ಒಬ್ಬ ವ್ಯಕ್ತಿಯ ಆರೋಗ್ಯದ ಕಥೆ ಅವನು/ಅವಳು ದೊಡ್ಡವರಾದ ಮೇಲೆ ಶುರುವಾಗೋದಿಲ್ಲ... ಗರ್ಭಾವಸ್ಥೆಗೂ ಮೊದಲು ತಾಯಿ-ತಂದೆಯ ಆರೋಗ್ಯ ಹೇಗಿದೆ, ಗರ್ಭಾವಸ್ಥೆಯಲ್ಲಿ ತಾಯಿಯ ಪೋಷಣೆ, ಗರ್ಭದಲ್ಲಿನ ಮಗುವಿನ ಬೆಳವಣಿಗೆ, ಮತ್ತು ಬಾಲ್ಯದ ಆರಂಭಿಕ ಪರಿಸರ ಇವೆಲ್ಲ ಆ ಮಗು ಮುಂದೆ ದೊಡ್ಡವರಾದಾಗಿನ ಆರೋಗ್ಯದ ಮೇಲೆ ಪರಿಣಾಮಬೀರುತ್ತವೆ ಅಂತ ಸಂಶೋಧನೆಗಳು ತೋರಿಸ್ತಿವೆ..
ಇಲ್ಲಿ Epigenetics ಅನ್ನೋ ಆಸಕ್ತಿದಾಯಕ ವಿಷಯ ಬರುತ್ತೆ. ಇದನ್ನ ಸರಳವಾಗಿ ಹೇಳಬೇಕು ಅಂದ್ರೆ, ನಮ್ಮ ಜೀನ್ಸ್ ಅನ್ನ ಒಂದು ಪುಸ್ತಕ ಅಂದುಕೊಳ್ಳಿ. ಆ ಪುಸ್ತಕದ ಅಕ್ಷರಗಳು (ಅಂದ್ರೆ ನಮ್ಮ DNA) ಸಾಮಾನ್ಯವಾಗಿ ಬದಲಾಗಲ್ಲ. ಆದ್ರೆ ಆ ಪುಸ್ತಕದಲ್ಲಿ ಯಾವ ಪುಟವನ್ನ, ಯಾವಾಗ, ಎಷ್ಟು ಜೋರಾಗಿ ಓದಬೇಕು ಅನ್ನೋದನ್ನ ನಮ್ಮ ಆಹಾರ, ದೈಹಿಕ ಚಟುವಟಿಕೆ, ನಿದ್ರೆ, ಒತ್ತಡ, ಪರಿಸರ ಇವೆಲ್ಲ ಸ್ವಲ್ಪ ಮಟ್ಟಿಗೆ ಪ್ರಭಾವಿಸಬಹುದು. ಅಂದ್ರೆ ನಮ್ಮ genetic code ಅನ್ನ ನಾವು ಬದಲಾಯಿಸಲ್ಲ, ಆದ್ರೆ ಅದು ಹೇಗೆ ಕೆಲಸ ಮಾಡುತ್ತೆ ಅನ್ನೋದರ ಮೇಲೆ ನಮ್ಮ ಜೀವನಶೈಲಿ ಸ್ವಲ್ಪ ಪ್ರಭಾವ ಬೀರಬಹುದು.
'ನಮ್ಮ ಮನೆಯಲ್ಲಿ Sugar, BP ಎಲ್ಲ ಇದೆ, ಹಾಗಾದ್ರೆ ನಮಗೂ ಖಚಿತವಾಗಿ ಬರುತ್ತಾ?' ಎಂದು ಕೇಳಿದರೆ ಹಾಗೇನಿಲ್ಲ. Family history ನಿಮ್ಮ risk ಅನ್ನ ಹೆಚ್ಚಿಸಬಹುದು, ಆದ್ರೆ ಅದೇ ನಿಮ್ಮ ಭವಿಷ್ಯ ಅಲ್ಲ. ನಮ್ಮ ಆಹಾರ, ದೈಹಿಕ ಚಟುವಟಿಕೆ, ದೇಹದ ತೂಕ, ನಿದ್ರೆ, ಒತ್ತಡ ನಿರ್ವಹಣೆ ಆರೋಗ್ಯಕರವಾಗಿಟ್ಟುಕೊಂಡ್ರೆ, ಅನೇಕ ಕಾಯಿಲೆಗಳ risk ಅನ್ನ ಗಣನೀಯವಾಗಿ ಕಡಿಮೆ ಮಾಡುವ ಅವಕಾಶ ನಮ್ಮ ಕೈಯಲ್ಲೇ ಇದೆ.
ಒಂದು ಉದಾಹರಣೆ ನೋಡೋಣ: ಒಬ್ಬ ವ್ಯಕ್ತಿ ಚಿಕ್ಕ ವಯಸ್ಸಲ್ಲೇ heart attack ಇಂದ ಮೃತಪಟ್ಟಾಗ, ನಾವು ಸಾಮಾನ್ಯವಾಗಿ "ಅವರು exercise ಮಾಡ್ತಿದ್ರು, ಚೆನ್ನಾಗಿ ತಿಂತಿದ್ರು, ಆದ್ರೂ ಹೀಗಾಯ್ತು" ಅಂತ ಹೇಳ್ತೀವಿ. ಆದ್ರೆ ಅವರ ಬಾಲ್ಯದ ಆಹಾರ ಹೇಗಿತ್ತು, ಅವರ ಹಲವು ವರ್ಷಗಳ ಒತ್ತಡ ಹೇಗಿತ್ತು, ಅವರ ನಿದ್ರೆಯ ಪದ್ಧತಿ ಹೇಗಿತ್ತು ಅನ್ನೋದು ನಮಗೆ ಗೊತ್ತಿರೋದಿಲ್ಲ. ಇವತ್ತಿನ ಆರೋಗ್ಯವನ್ನ ಮಾತ್ರ ನೋಡಿ ಒಬ್ಬರ ಸಂಪೂರ್ಣ ಆರೋಗ್ಯದ ಕಥೆಯನ್ನ ಅರ್ಥಮಾಡಿಕೊಳ್ಳಲು ಆಗಲ್ಲ.
ಎಷ್ಟೇ ಮುಂದುವರೆದರೂ ಆಯುಷ್ಯ ನಮ್ಮ ಕೈಯಲ್ಲಿ ಇಲ್ಲ ಅನ್ನೋದು ಸತ್ಯ...ಆದರೆ ಇರುವಷ್ಟು ದಿನ ಆದಷ್ಟು ರೋಗಮುಕ್ತರಾಗಿ ಬದುಕುವ ಪ್ರಯತ್ನ ನಾವು ಮಾಡಬಹುದು.
ಇಲ್ಲಿ ಎರಡು ಮುಖ್ಯ ವಿಷಯ ನಾನು ಗಮನಿಸಿರೋದು :
1) ಇತ್ತೀಚೆಗೆ High BP ಮತ್ತು ಮಧುಮೇಹ ಗಳನ್ನ ಜನ ಎಷ್ಟು ನಾರ್ಮಲೈಜ್ ಮಾಡಿದ್ದಾರೆ ಅಂದ್ರೆ ಅದು ಎಲ್ಲರಲ್ಲೂ ಇರುವಂತದ್ದು ಮಾತ್ರೆ ತೆಗೆದುಕೊಂಡ್ರೆ ಆಯ್ತು ಅಂತ ಆಹಾರ, ಜೀವನಶೈಲಿ ಬದಲಾವಣೆ ಮಾಡಿಕೊಳ್ಳೋದೇ ಇಲ್ಲ..ಆದರೆ ಎಷ್ಟೋ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಇವೇ ಮೊದಲ ಕಾರಣ ಆಗಿರತ್ತೆ.. ಇನ್ನೂ ಹಲವರು ಮಾತ್ರೆ ತಗೊಂಡ್ರೆ ಅದೇ ರೂಢಿ ಆಗತ್ತೆ ಅಂತ ಅದನ್ನೂ ತಗೊಳಲ್ಲ.🙆
2) 30-35 ವರ್ಷ ಅಥವಾ ಮಕ್ಕಳಾಗುವ ವರೆಗೆ ಕುಡಿತ- ಸಿಗರೇಟ್,ಜಂಕ್ ಫುಡ್ ಎಲ್ಲ ಇದ್ದು ನಂತರ ಡಯಟ್, ಜಿಮ್ ಅಂತ ಹೋಗಿ ಫಿಟ್ನೆಸ್ ಬಗ್ಗೆ ಕಾಳಜಿ ತೆಗೆದುಕೊಳ್ಳೋರಿದ್ದಾರೆ.. ಮೊದಲೇ ಹೇಳಿದ ಹಾಗೆ ಆರೋಗ್ಯ ತಕ್ಷಣಕ್ಕೆ ಸಿಗೋದಲ್ಲ...ಅದೂ ಅಲ್ಲದೇ ಮಕ್ಕಳನ್ನು ಪಡೆಯುವ ಮೊದಲಿನ ನಿಮ್ಮ ದೈಹಿಕ- ಮಾನಸಿಕ ಆರೋಗ್ಯ ನಿಮ್ಮ ಮಗುವಿನ ಆರೋಗ್ಯದ ಮೇಲೂ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದನ್ನ ದಯವಿಟ್ಟು ನೆನಪಿನಲ್ಲಿಡಿ ಮತ್ತು ಇದು ಕೇವಲ ಮಹಿಳೆಯರಿಗಷ್ಟೇ ಸೀಮಿತವಲ್ಲ...ಪುರುಷರಿಗೂ ಸಹ.
ಪೋಷಕರ ಆರೋಗ್ಯ ಮಗುವಿನ ಆರಂಭಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ; ಆ ಮಗು ಬೆಳೆದು ತನ್ನದೇ ಆಹಾರ-ಜೀವನಶೈಲಿ ರೂಪಿಸಿಕೊಳ್ಳುತ್ತೆ; ಮುಂದೆ ಅದೇ ಮಗು ಪೋಷಕರಾದಾಗ, ಅವರ ಆರೋಗ್ಯದ ಅರಿವು ಮತ್ತೆ ಮುಂದಿನ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತೆ. ಇದೊಂದು ರೀತಿಯ ಸರ್ಕಲ್. ಪೋಷಕರ ಆರೋಗ್ಯ → ಮಗುವಿನ ಬಾಲ್ಯದ ಪರಿಸರ → ಮಗುವಿನ ಜೀವನಶೈಲಿ → ಮತ್ತೆ ಮುಂದಿನ ಪೀಳಿಗೆಯ ಪೋಷಕರ ಆರೋಗ್ಯ. ಈ ಸುತ್ತು ಆರೋಗ್ಯಕರವಾಗಿಯೂ ಮುಂದುವರಿಯಬಹುದು, ಇಲ್ಲದಿದ್ರೆ ಅನಾರೋಗ್ಯಕರ ಅಭ್ಯಾಸಗಳೊಂದಿಗೂ ಮುಂದುವರಿಯಬಹುದು.
ಇದೇ ಕಾರಣಕ್ಕಾಗಿಯೇ Nutrition ಮತ್ತು Health Education ಮಕ್ಕಳ regular educationನ ಒಂದು ಭಾಗವಾಗಬೇಕು ಎಂಬುದು ನನ್ನ ಅಭಿಪ್ರಾಯ. ಈ ಅರಿವು ಪೋಷಕರಲ್ಲಿಯೂ ಇರಬೇಕು. ಏಕೆಂದರೆ ಮಕ್ಕಳು ನಾವು ಹೇಳುವುದಕ್ಕಿಂತ ಹೆಚ್ಚಾಗಿ ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ. ಮನೆಯಲ್ಲಿನ ಆಹಾರ ಪದ್ಧತಿ, physical activity, ನಿದ್ರೆ ಮತ್ತು ಆರೋಗ್ಯದ ಬಗ್ಗೆ ಪೋಷಕರ ಮನೋಭಾವ ಮಕ್ಕಳ ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತದೆ.
ನಮ್ಮ family history ನಮ್ಮ ಕೈಯಲ್ಲಿಲ್ಲ. ನಮ್ಮ genes( ಅನುವಂಶಿಕ) ಅನ್ನ ನಾವು ಆಯ್ಕೆ ಮಾಡ್ಕೊಳ್ಳಲ್ಲ. ಆದ್ರೆ ನಮ್ಮ ಜೀವನಶೈಲಿಯ ಅನೇಕ ಆಯ್ಕೆಗಳು ಈವತ್ತೂ ನಮ್ಮ ಕೈಯಲ್ಲೇ ಇವೆ.
ದೇವರನ್ನ ನಂಬಿದವರಿಗೆ ಆ ಶಕ್ತಿಯ ಮೇಲೆ ಮೇಲೆ ಭಕ್ತಿ ಇರಬೇಕೇ ಹೊರತು ಭಯವಲ್ಲ.. ಅದೇ ರೀತಿ ಆರೋಗ್ಯದ ವಿಷಯದಲ್ಲೂ ಅನಾವಶ್ಯಕ ಭಯ ಬೇಡ...ಕಾಳಜಿ ಇದ್ದರೆ ಸಾಕು..
Dr. Poornima Lalguli
Dietitian
This article is general nutrition information and is not a substitute for individual medical advice. Please consult a qualified professional about your specific circumstances.

