ಬಹೂಪಯೋಗಿ ತೆಂಗಿನಕಾಯಿ
ಮಲೆನಾಡು ಮತ್ತು ಕರಾವಳಿಯ ಅಡುಗೆಯ ಅವಿಭಾಜ್ಯ ಅಂಗವಾದ ತೆಂಗಿನಕಾಯಿಯ ಪೌಷ್ಟಿಕ ಗುಣಗಳು, ಆರೋಗ್ಯದಲ್ಲಿ ಅದರ ಪಾತ್ರ ಹಾಗೂ ನಮ್ಮ ದೈನಂದಿನ ಆಹಾರದಲ್ಲಿ ಅದರ ಮಹತ್ವವನ್ನು ತಿಳಿಯೋಣ.

ಮಲೆನಾಡು,ಕರಾವಳಿ ಪ್ರದೇಶದವರಿಗೆ ತೆಂಗಿನ ಕಾಯಿ ಇಲ್ಲದ ಅಡುಗೆ ಮಾಡುವ ರೂಢಿ ಕಡಿಮೆ ಹಾಗೆಯೇ ರುಚಿಸದು ಕೂಡ.ನಮ್ಮ ಪೂರ್ವಜರೆಲ್ಲ ಬೆಳೆದ ತೆಂಗಿನಕಾಯಿಗಳಿಂದ ಮನೆಯಲ್ಲಿಯೇ ಎಣ್ಣೆ ತಯಾರಿಸಿ ಉಪಯೋಗಿಸುತ್ತಿದ್ದರು.ಆದರೆ ಈ ಹಿಂದಿನ ಕೆಲವು ವರ್ಷಗಳಲ್ಲಿ ತೆಂಗಿನಕಾಯಿ ಮತ್ತು ಅದರ ಉತ್ಪನ್ನಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುವುದರಿಂದ ದೇಹದಲ್ಲಿ ಕೊಲೆಸ್ಟಿರಾಲ್ ಹೆಚ್ಚಾಗಿ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ಎಂಬ ಕಲ್ಪನೆ ಮೂಡಿಸಲಾಯಿತು.ಇದರಿಂದಾಗಿ ನಾನಾ ರೀತಿಯಲ್ಲಿ ಶುದ್ಧತೆಯ ಹಣೆಪಟ್ಟಿಯನ್ನು ಹಚ್ಚಿಕೊಂಡಂತಹ,ಅತಿಯಾಗಿ ಸಂಸ್ಕರಣೆಗೊಳಪಡಿಸಿಂದಂತಹ ಅಡಿಗೆ ಎಣ್ಣೆಗಳು ಮಾರ್ಕೆಟ್ ನಲ್ಲಿ ಕಡಿಮೆ ಬೆಲೆಗೆ ದೊರೆತು ಎಲ್ಲರ ಮನೆ ಸೇರತೊಡಗಿದವು ದುರದೃಷ್ಟಾವಶಾತ್ ಜೊತೆಗೆ ರೋಗಗಳೂ ಸಹ.
ಹಲವರಲ್ಲಿ ಈಗಲೂ ಸಹ ತೆಂಗಿನ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಪೂರಕವೋ ಅಥವಾ ಮಾರಕವೋ ಎಂಬ ಪ್ರಶ್ನೆಯಿರಬಹುದು.ಆದರೆ ಖಂಡಿತ,ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿರುವಂತಹ ತೆಂಗಿನಕಾಯಿ ಅಥವಾ ಅದರ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಪೂರಕವಾದುದು.ಇತ್ತೀಚಿನ ಅನೇಕ ಸಂಶೋಧನೆಗಳು ಸಹ ಇದಕ್ಕೆ ಪುರಾವೆಯನ್ನು ಒದಗಿಸಿ, ಸೂಪರ್ ಫುಡ್ ಎಂದು ಪರಿಗಣಿಸಿದೆ.
ಸ್ಯಾಚುರೇಟೆಡ್ ಕೊಬ್ಬು ಇದ್ದರೂ ಸಹ ತೆಂಗಿನ ಎಣ್ಣೆ ಶೇಕಡಾ ೪೫ರಷ್ಟು ಲಾರಿಕ್ ಆಮ್ಲ ಎಂಬ ಮೀಡಿಯಂ ಚೈನ್ ಟ್ರೈಗ್ಲಿಸರೈಡ್ಸ್ ಗಳಿಂದ ಉಂಟಾಗಿದೆ. ಈ ವಿಶೇಷವಾದ ಅಂಶದಿಂದಾಗಿ, ನಮ್ಮ ಜೀರ್ಣಾಂಗದಲ್ಲಿ ಅತೀ ವೇಗವಾಗಿ ಚಲಿಸಿ ಪಚನಗೊಂಡು ದೇಹಕ್ಕೆ ತ್ವರಿತವಾಗಿ ಶಕ್ತಿಯನ್ನು ಒದಗಿಸಬಲ್ಲದು.
ತೆಂಗಿನೆಣ್ಣೆ:ಅರೋಗ್ಯಕ್ಕೆ ಹೇಗೆಲ್ಲ ಉಪಯೋಗವಾಗಬಲ್ಲುದು?
· ರಕ್ತದ LDL ಪ್ರಮಾಣವನ್ನು ಕಡಿಮೆ ಮಾಡಿ HDL ಪ್ರಮಾಣವನ್ನು(ಒಳ್ಳೆಯ ಕೊಬ್ಬು) ಹೆಚ್ಚಿಸುವುದು.
· ಇತರೆ ಹಲವಾರು ಅಡಿಗೆ ಎಣ್ಣೆಗಳು ಲಾಂಗ್ ಚೈನ್ ಟ್ರೈಗ್ಲಿಸರೈಡ್ಸ್ ಅನ್ನು ಹೊಂದಿರುತ್ತವೆ.ಆದರೆ ತೆಂಗಿನ ಎಣ್ಣೆ ಮೀಡಿಯಂ ಚೈನ್ ಟ್ರೈಗ್ಲಿಸರೈಡ್ಸ್ ಹೊಂದಿರುವುದರಿಂದ ತ್ವರಿತ ಶಕ್ತಿಯಾಗಿ ಉಪಯೋಗವಾಗುವುದು ಹಾಗೇ ಉಳಿದ ಫ್ಯಾಟ್ಟಿ ಆಸಿಡ್ ಗಳು ಕೀಟೋನ್ ಗಳಾಗಿ ಮಾರ್ಪಟ್ಟು ದೇಹದಲ್ಲಿನ ಅನಾವಶ್ಯಕ ಕೊಬ್ಬನ್ನು ಕರಗಿಸುವುದು.
· ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೇ,ಮೂರ್ಛೆ ರೋಗ,ಪಾರ್ಶ್ವವಾಯು ಇತ್ಯಾದಿ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಬಲ್ಲದು. ಈ ಕುರಿತು ಇನ್ನೂ ಅನೇಕ ಸಂಶೋಧನೆಗಳು ನಡೆಯುತ್ತಿವೆ.
· ಚರ್ಮದ ತೇವಾಂಶವನ್ನು ಸಮತೋಲನದಲ್ಲಿರಿಸಿ ಕಾಂತಿಯನ್ನು ಹೆಚ್ಚಿಸುವುದಲ್ಲದೇ, ಚರ್ಮ ರೋಗಗಳನ್ನು ತಡೆಯುವುದು,ತಲೆಕೂದಲಿನ ಪೋಷಣೆಗೆ ಉತ್ತಮ.
· ಅತೀ ಮುಖ್ಯವಾಗಿ ದೇಹವನ್ನು ಸೇರಿದ ಲಾರಿಕ್ ಆಸಿಡ್,ಮೊನೋ ಲಾರಿನ್ ಎಂಬ ಅಂಶವನ್ನು ಉತ್ಪನ್ನ ಮಾಡುವುದು.ಇವೆರಡೂ ಸಹ ದೇಹವನ್ನು ಸೇರುವ ಅನಾವಶ್ಯಕ,ರೋಗ ಉಂಟುಮಾಡುವ ಬ್ಯಾಕ್ಟೀರಿಯಾ,ವೈರಸ್ ಗಳನ್ನು ತಡೆದು, ಆರೋಗ್ಯ ಕಾಪಾಡುವುದು.
· ಥೈರಾಯ್ಡ್ ಸಮಸ್ಯೆ ಇರುವವರು ಸಹ ನಿಯಮಿತವಾಗಿ ಶುದ್ಧ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಸಮಸ್ಯೆ ಹತೋಟಿಗೆ ಬರುವುದು
· ಜೀರ್ಣಕ್ರಿಯೆಯೆಗೆ ಅಗತ್ಯವಿರುವ ಬ್ಯಾಕ್ಟೀರಿಯಾಗಳ ಕಾರ್ಯಕ್ಷಮತೆ ಹೆಚ್ಚಿಸಿ, ದೇಹದಲ್ಲಿ ಆಹಾರಾಂಶಗಳು ಸುಲಭವಾಗಿ ಹೀರಿಕೊಳ್ಳಲು ಸಹಾಯಕ.
ಕಳಪೆ ಗುಣಮಟ್ಟದ ಎಷ್ಟೋ ಅಡಿಗೆ ಎಣ್ಣೆಗಳು ಬಿಸಿ ಮಾಡಿದಾಗ ಕ್ಯಾನ್ಸರ್ ಕಾರಕ ಅಂಶಗಳನ್ನು ಬಿಡುಗಡೆ ಮಾಡುವುದು ಎಂಬುದು ಸಂಶೋಧನೆಗಳಿಂದಲೇ ಧೃಡಪಟ್ಟಿದೆ.ಈ ರೀತಿಯ ಅಡ್ಡ ಪರಿಣಾಮಗಳು ನಮ್ಮಲ್ಲೇ ಬೆಳೆದು ಅತಿಯಾಗಿ ಸಂಸ್ಕರಿಸಲ್ಪಡದೇ ಇರುವ ಶುದ್ಧ ತೆಂಗಿನೆಣ್ಣೆಯಿಂದ ಉಂಟಾಗುವುದಿಲ್ಲ.(ಹಾನಿಕಾರಕವಲ್ಲವೆಂದು ಪ್ರತಿದಿನ ಯತೇಚ್ಛವಾಗಿ ಕರಿದ ತಿನಿಸುಗಳನ್ನು ತಿನ್ನುವಂತಿಲ್ಲ. ನೆನಪಿಡಿ: ಯಾವುದಾದರೂ ಅತಿಯಾದರೆ ಕೆಡುಕೇ!)
ಔಷಧವಾಗಿ ಬಳಸುತ್ತಿದ್ದರೆ, ಉತ್ತಮ ಪರಿಣಾಮಕ್ಕಾಗಿ ವರ್ಜಿನ್ ತೆಂಗಿನ ಎಣ್ಣೆಯನ್ನೇ ಬಳಸುವುದು ಅಗತ್ಯ.
Dr. Poornima Lalguli
Dietitian
This article is general nutrition information and is not a substitute for individual medical advice. Please consult a qualified professional about your specific circumstances.

